ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

ಶಾಲೆಯ ಬಗ್ಗೆ

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ,) ಸಿರಿಗೆರೆ

ಶ್ರೀ ರುದ್ರೇಶ್ವರ ಪ್ರೌಢಶಾಲೆ, ಪಾಂಡೋಮಟ್ಟಿ-ಗೊಪ್ಪೇನಹಳ್ಳಿ

ಪಾಂಡೋಮಟ್ಟಿ ಮತ್ತು ಗೊಪ್ಪೇನಹಳ್ಳಿ ಗ್ರಾಮದ ಪಕ್ಷಿನೋಟ

      ಪಾಂಡೋಮಟ್ಟಿ ಗ್ರಾಮವು ಚನ್ನಗಿರಿ ತಾಲ್ಲೂಕು ಕೇಂದ್ರದಿದ ೧೦ ಕಿ.ಮೀ ದೂರದಲ್ಲಿದೆ. ಸ್ಥಳೀಯರ ನಂಬಿಕೆಯ ಪ್ರಕಾರ ಪಾಂಡೋಮಟ್ಟಿ ಗ್ರಾಮದಲ್ಲಿರುವ  ಮಟ್ಟಿಯಲ್ಲಿ (ಗುಡ್ಡ) ಕೆಲವು ದಿನಗಳ ಕಾಲ ಪಾಂಡವರು ಜೋಗಿಯರ ವೇಶದಲ್ಲಿ ಅಜ್ಞಾತವಾಸ ಕಳೆದಿದ್ದರಿಂದ ಈ ಗ್ರಾಮಕ್ಕೆ ಪಾಂಡವರು ಇದ್ದ ಮಟ್ಟಿ ಎಂಬರ್ಥದಲ್ಲಿ ಪಾಂಡೋಮಟ್ಟಿ ಎಂಬ ಹೆಸರು ಬಂದಿತೆಂದು ಪ್ರತೀತಿ ಇದೆ. ಊರಿನ ಪಶ್ಚಿಮ ಭಾಗದಲ್ಲಿ ೨೧ ಕಿ.ಮೀ ದೂರದಲ್ಲಿ “ಭೀಮನ ದುಂಡಿ” ಎಂಬ ಕಣಿವೆ ಇದ್ದು ಅಲ್ಲಿ ಭೀಮಸೇನನು ಖಾರ ಹರಿಯುತ್ತಿದ್ದ ದುಂಡಿ ಇದೆ. ಇದು ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂಬ ಸಮರ್ಥನೆಯನ್ನು ಊರಿನ ಜನ ನೀಡುತ್ತಾರೆ. ಪಾಂಡೋಮಟ್ಟಿ ಗ್ರಾಮವು ಅಡಿಕೆ ತೋಟಗಳಿಂದ ಆವೃತವಾಗಿದ್ದು ಇಲ್ಲಿನ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಅಡಿಕೆ ಬೆಳೆಯಿಂದಾಗಿ ಆರ್ಥಿಕವಾಗಿ ಸದೃಢರಾಗಿದ್ದಾರೆ. ಪ್ರಸ್ತುತ ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರಯತ್ನದ ಫಲವಾಗಿ ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ಇಲ್ಲಿನ ಕೆರೆಗಳು ತುಂಬುವಂತಾಗಿದ್ದು ನಮ್ಮ ಬಾಳು ಹಸಿರಾಗಿದೆ ಎಂದು ಇಲ್ಲಿನ ಜನ ಶ್ರೀಗಳವರನ್ನು ಭಕ್ತಿಯಿಂದ ಪೂಜಿಸುತ್ತಾರೆ.

        ಗೊಪ್ಪೇನಹಳ್ಳಿ ಗ್ರಾಮವು ಚನ್ನಗಿರಿ ತಾಲ್ಲೂಕು ಕೇಂದ್ರದಿಂದ ೧೪ ಕಿ.ಮೀ ದೂರದಲ್ಲಿದೆ. ಸ್ಥಳೀಯರ ನಂಬಿಕೆಯ ಪ್ರಕಾರ ಈ ಗ್ರಾಮವು ಮೊದಲು ಹೆಸರಿಲ್ಲದ ಒಂದು ಸ್ಥಳವಾಗಿತ್ತು. ದೊಂಬರು ಎಂಬುವರು ಇಲ್ಲಿ ಹಲವಾರು ವರ್ಷಗಳ ಕಾಲ ವಾಸವಾಗಿದ್ದರು ಇವರು ಎಲ್ಲಿಗೇ ಹೋದರೂ ಗೊಪ್ಪೆ (ಕೊಪ್ಪೆ) ಹಾಕಿಕೊಂಡು ಓಡಾಡುತ್ತಿದ್ದರು, ಹಾಗಾಗಿ ಇವರಿಂದ ಈ ಊರಿಗೆ ಗೊಪ್ಪೇನಹಳ್ಳಿ ಎಂಬ ಹೆಸರು ಬಂತೆಂದೂ ಪ್ರತೀತಿ ಇದೆ. ಗೊಪ್ಪೇನಹಳ್ಳಿ ಗ್ರಾಮವು ಅಡಿಕೆ ತೋಟಗಳಿಂದ ಆವೃತವಾಗಿದ್ದು, ಇಲ್ಲಿನ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಅಡಿಕೆ ಬೆಳೆಯಿಂದಾಗಿ ಆರ್ಥಿಕವಾಗಿ ಸದೃಢರಾಗಿದ್ದಾರೆ. ಪ್ರಸ್ತುತ ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರಯತ್ನದ ಫಲವಾಗಿ ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ಇಲ್ಲಿನ ಕೆರೆಗಳು ತುಂಬುವಂತಾಗಿದ್ದು ನಮ್ಮ ಬಾಳು ಹಸಿರಾಗಿದೆ ಎಂದು ಇಲ್ಲಿನ ಜನ ಶ್ರೀಗಳವರನ್ನು ಭಕ್ತಿಯಿಂದ ಪೂಜಿಸುತ್ತಾರೆ.


ಎರಡೂ ಗ್ರಾಮಗಳಲ್ಲಿ ಶ್ರೀ ಮಠದ ಭಕ್ತ ಸಮೂಹ ಹೆಚ್ಚಾಗಿದ್ದು ತಮ್ಮ ತನು ಮನ ಧನ ಅರ್ಪಿಸುತ್ತಿದ್ದಾರೆ.

ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಸ್ಥಾಪನೆ

           ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಎಂಬ ಬಸವಣ್ಣನವರ ವಚನದಂತೆ ಜ್ಞಾನ ಸಂಪಾದನೆಯು ಗ್ರಾಮೀಣ ಮಕ್ಕಳಿಗೆ ಮರೀಚಿಕೆಯಾದ ಕಾಲಘಟ್ಟದಲ್ಲಿ ಶಿಕ್ಷಣವನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆಗಿನ ಕಾಲದಲ್ಲಿ ಚನ್ನಗಿರಿಯನ್ನು ಬಿಟ್ಟರೆ ೧೫ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಪ್ರೌಢಶಾಲೆ ಇರಲಿಲ್ಲ. ಸರ್ಕಾರದ ವತಿಯಿಂದ ಇಲ್ಲಿ ತಾಲ್ಲೂಕು ಬೋರ್ಡ್ ಪರವಾಗಿ ಒಂದು ಹೈಸ್ಕೂಲ್ ಸ್ಥಾಪಿಸಬೇಕೆಂಬ ನಿರ್ಣಯವಾಗಿತ್ತು. ಆದರೆ ತಾಲ್ಲೂಕು ಬೋರ್ಡ್ನವರು ಆಸಕ್ತಿ ವಹಿಸಲಿಲ್ಲ. ಅಂತಹ ಸಂದರ್ಭದಲ್ಲಿ ಬಿ ಪುರದಪ್ಪನವರು ವಕೀಲರು, ಗೊಪ್ಪೇನಹಳ್ಳಿ ಪಟೇಲ್ ರಾಜಪ್ಪನವರು ಮುಂತಾದವರು ಹಿರಿಯ ಜಗದ್ಗುರುಗಳವರನ್ನು ಭೇಟಿ ಮಾಡಿ ಗೊಪ್ಪೇನಹಳ್ಳಿ ಮತ್ತು ಪಾಂಡೋಮಟ್ಟಿ ನಡುವೆ ಸುತ್ತಲಿನ ಹಳ್ಳಿಗಳಿಗೆ ಅನುಕೂಲವಾಗುವಂತೆ ಒಂದು ಹೈಸ್ಕೂಲ್ ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡಾಗ ಗುರುಗಳು ಒಪ್ಪಿಕೊಂಡು ಹೈಸ್ಕೂಲು ಮಂಜೂರಾಯಿತು. 

         ಸಿರಿಗೆರೆಯ ಪ್ರೌಢಶಾಲೆಯನ್ನು ಬಿಟ್ಟರೆ ಶ್ರೀಸಂಸ್ಥೆಯ ಎರಡನೇ ಪ್ರೌಢಶಾಲೆಯೇ ಗೊಪ್ಪೇನಹಳ್ಳಿಯ ಶ್ರೀ ರುದ್ರೇಶ್ವರ ಪ್ರೌಢಶಾಲೆ. ಪ್ರಾರಂಭದಲ್ಲಿ ೧೯೬೧ ರಲ್ಲಿ ವಿದ್ಯಾರ್ಥಿಗಳಿಗೆ ಗೊಪ್ಪೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲೇ ಪಾಠ ಪ್ರವಚನಗಳು ಆರಂಭಗೊಂಡವು. ದಿನಾಂಕ ೨೫-೦೫-೧೯೬೨ ರಲ್ಲಿ ಪ್ರೌಢಶಾಲೆ ಆರಂಭಿಸಲು ಸರ್ಕಾರದಿಂದ ಅಧಿಕೃತವಾಗಿ ಅನುಮತಿ ದೊರೆತ ನಂತರ ದಿನಾಂಕ : ೧೯-೦೬-೧೯೬೨ ರಲ್ಲಿ ಅಧಿಕೃತವಾಗಿ ಶಾಲೆ ಪ್ರಾರಂಭಗೊಂಡಿತು. ದಾಖಲಾತಿಯು ಹೆಚ್ಚಾದ ಕಾರಣ ಕೊಠಡಿ ಸಮಸ್ಯೆ ಉಂಟಾಗಿದ್ದರಿಂದ ಅದೇ ಊರಿನ ಮುಖಂಡರುಗಳಾದ ಮೇಗಳಮನೆ ಶಿವಲಿಂಗಪ್ಪ, ಸಿದ್ಧಲಿಂಗಪ್ಪನವರು ಮತ್ತು ಛರ‍್ಮನ್ ಚನ್ನಪ್ಪನವರ ಮನೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು.

       ಶ್ರೀ ಮಠದ ಮತ್ತು ಹಿರಿಯ ಜಗದ್ಗುರುಗಳವರ ಮಾರ್ಗದರ್ಶನ ಮತ್ತು ಸಹಕಾರವನ್ನು ಪಡೆದು ಗೊಪ್ಪೇನಹಳ್ಳಿಯ ಪಟೇಲ್ ರಾಜಪ್ಪ, ನಂಜುಂಡಪ್ಪ, ಪಾಂಡೋಮಟ್ಟಿಯ ಛರ‍್ಮನ್ ರುದ್ರಪ್ಪ, ಬಿ ಪುರದಪ್ಪ ವಕೀಲರು, ಮಲಹಾಳ್‌ನ ನಂಜಪ್ಪ, ಸಿದ್ರಾಮಪ್ಪ ವಡ್ನಾಳ್‌ನ ನಾಗಪ್ಪ, ಸಿದ್ಧಪ್ಪ ಪೆನ್ನಸಮುದ್ರದ ಬಸಪ್ಪಗೌಡ್ರು, ಚನ್ನಬಸಪ್ಪಗೌಡ್ರು, ಹಲಕನಹಾಳ್ ಪಟೇಲ್ ರುದ್ರಪ್ಪಗೌಡ್ರು ಮರವಂಜಿಯ ಮಲ್ಲಪ್ಪ ಗೌಡ್ರು, ಮೇದುಗೊಂಡನಹಳ್ಳಿಯ ಮಲ್ಲಪ್ಪನವರು, ಭೈರಲಿಂಗಪ್ಪನವರ ಶಿವಲಿಂಗಪ್ಪನವರು ಹಾಗೂ ಬನ್ನಿಹಟ್ಟಿಯ ಗುರುಬಸಪ್ಪರ ಮಲ್ಲಪ್ಪನವರು ಮತ್ತು ಡಾ. ಬಸವಣ್ಣಯ್ಯನವರು ಅತ್ಯಂತ ಶ್ರದ್ಧಾಪೂರ್ವಕ ಕಾಳಜಿ ಮತ್ತು ಆಸಕ್ತಿ ವಹಿಸಿ ಗೊಪ್ಪೇನಹಳ್ಳಿಯ ಗೋಮಾಳಕ್ಕೆ ಸೇರಿದ ಸುಮಾರು ೨೦ ಎಕರೆ ಭೂಮಿಯನ್ನು ಪಡೆದುಕೊಂಡು ಶ್ರೀಮಠ ಮತ್ತು ಸ್ಥಳೀಯ ದಾನಿಗಳಿಂದ ಹಣವನ್ನು ಸಂಗ್ರಹಿಸಿ ಗೊಪ್ಪೇನಹಳ್ಳಿ ಮತ್ತು ಪಾಂಡೋಮಟ್ಟಿಯ ನಡುವೆ ಒಂದು ಸುಸಜ್ಜಿತವಾದ ಶಾಲಾ ಕಟ್ಟಡವನ್ನು ನಿರ್ಮಿಸಲು ಶರಣ ಎಂ ಸಿದ್ದಪ್ಪನವರು ಇವರ ಅಧ್ಯಕ್ಷತೆಯಲ್ಲಿ ಶರಣ ಹೆಚ್ ಎಸ್ ರುದ್ರಪ್ಪನವರು ಮೈಸೂರು ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿಯ ಅಧ್ಯಕ್ಷರು ಇವರಿಂದ ಶಂಕುಸ್ಥಾಪನೆ ಮಾಡಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ದಿನಾಂಕ-೨೧-೧೦-೧೯೬೩ ರಂದು ಶರಣ ಡಿ ಪರಮೇಶ್ವರಪ್ಪ ಎಂ.ಎಲ್.ಎ ಇವರ ಅಧ್ಯಕ್ಷತೆಯಲ್ಲಿ ಶರಣ ಬಿ ಡಿ ಜತ್ತಿಯವರ    ಅಮೃತ ಹಸ್ತದಿಂದ ಶಾಲಾ ಕಟ್ಟಡವನ್ನು ಉದ್ಘಾಟಿಸಲಾಯಿತು.

         ಈ ಶಾಲೆಗೆ ರುದ್ರೇಶ್ವರ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಗಿದೆ ಕಾರಣವಿಷ್ಟೆ ಇಲ್ಲಿಗೆ ಸಮೀಪದಲ್ಲಿ ಮಾವಿನಹೊಳೆ ಎಂಬ ಒಂದು ಗ್ರಾಮವಿದೆ. ಈ ಪ್ರಾಂತದವರನೇಕರು ಈ ದೇವರಿಗೆ ನಡೆದುಕೊಳ್ಳುತ್ತಾರೆ ಮತ್ತು ದೂರದೂರಿನಿಂದಲೂ ಭಕ್ತಾದಿಗಳು ಬರುತ್ತಾರೆ ಆದಕಾರಣ ಶಾಲೆಗೆ ಈ ಹೆಸರಿಡಲಾಗಿದೆ ಹೊರತು ಮತ್ತಾವ ವೈಶಿಷ್ಟ್ಯವೂ ಇಲ್ಲ. (ದಿಟ್ಟ ಹೆಜ್ಜೆ ಧೀರ ಕ್ರಮ ಪುಸ್ತಕದಲ್ಲಿ ಶ್ರೀಗಳವರು ಹೇಳಿರುವ ಮಾತು)

       ಶಾಲಾ ಕಟ್ಟಡವು ಸಿ ಆಕಾರದಲ್ಲಿದ್ದು, ತಾಲ್ಲೂಕಿನಲ್ಲಿಯೇ ಅತಿದೊಡ್ಡ, ವಿಶಾಲವಾದ ಗ್ರಾಮೀಣ ಪ್ರೌಢಶಾಲೆಯಾಗಿದ್ದು ೧ ಮುಖ್ಯಶಿಕ್ಷಕರು ಮತ್ತು ಕಛೇರಿ ಕೊಠಡಿ, ೧ ಅಧ್ಯಾಪಕರ ಕೊಠಡಿ, ೭ ತರಗತಿ ಕೊಠಡಿಗಳು, ೧ ಟೆಲಿಶಿಕ್ಷಣ ಕೊಠಡಿ, ೧ ಸಭಾಂಗಣ, ೧ ಪ್ರಯೋಗಾಲಯ ಕೊಠಡಿ, ೧ ಕ್ರೀಡಾ ಕೊಠಡಿ, ೧ ಗ್ರಂಥಾಲಯ, ೧ ಕಂಪ್ಯೂಟರ್ ಕೊಠಡಿ, ೧ ಅಕ್ಷರ ದಾಸೋಹ ಅಡುಗೆ ಮನೆ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ಟ್ಯಾಂಕ್ ಮತ್ತು ಆರ್.ಓ ಫಿಲ್ಟರ್, ವಿಶಾಲವಾದ ಆಟದ ಮೈದಾನ, ಉತ್ತಮ ಪ್ರಶಾಂತವಾದ ಕಲಿಕಾ ಪರಿಸರ ಮತ್ತು ವಿಶಾಲವಾದ ಶಿವಕುಮಾರ ರಂಗಮಂದಿರವನ್ನು ಒಳಗೊಂಡಿದೆ. ಶಾಲೆಯು ಮುಂಭಾಗದಲ್ಲಿ ಸಂಪೂರ್ಣ ಕಾಂಪೌಂಡ್ ಪ್ರವೇಶ ದ್ವಾರದಿಂದ ಒಳಬರುತ್ತಿದ್ದಂತೆ ಶಾಲಾ ಆವರಣದಲ್ಲಿ ಹಿರಿಯ ಲಿಂ|| ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮಂಟಪ ಶಾಲೆಯ ಪ್ರಮುಖ ಆಕರ್ಷಣೆಯಾಗಿದೆ. ಇಂದಿಗೂ ಶಾಲೆಗೆ ಬರುವ ಹಿರಿಯರು ಗುರುಗಳಿಗೆ ನಮಸ್ಕರಿಸಿಯೇ ಶಾಲೆಯ ಒಳಗೆ ಬರುತ್ತಾರೆ. ಇಂತಹ ಶಾಲೆಯ ನಿರ್ಮಾಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು.

       ಲಿಂ|| ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮಂಟಪವನ್ನು ಬಿ ಎಂ ಈಶ್ವರಪ್ಪನವರು ಮುಖ್ಯೋಪಾಧ್ಯಾಯರಾಗಿದ್ದ ಅವಧಿಯಲ್ಲಿ ಅವರ ಮುಂದಾಳತ್ವದಲ್ಲಿ ಸದ್ಭಕ್ತರ ಸಹಕಾರ ಪಡೆದು ಗೊಪ್ಪೇನಹಳ್ಳಿಯ ಶಿಲ್ಪಿಗಳಾದ ಶರಣ ಪರಮೇಶ್ವರಾಚಾರ್‌ರವರಿಂದ ಪ್ರತಿಮೆ ಕೆತ್ತನೆ ಮಾಡಿಸಿ ದಿನಾಂಕ-೧೧-೦೪-೧೯೯೦ ರಂದು ಪ್ರತಿಷ್ಠಾಪನೆ ಮಾಡಲಾಗಿರುತ್ತದೆ.

       ಆರಂಭದಲ್ಲಿ ಗೊಪ್ಪೇನಹಳ್ಳಿ ಸುತ್ತಮುತ್ತಲೂ ಎಲ್ಲೂ ಪ್ರೌಢಶಾಲೆಗಳಿಲ್ಲದ ಕಾರಣ ಹೊನ್ನೆಬಾಗಿ, ರಾಜಗೊಂಡನಹಳ್ಳಿ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ವಡ್ಡನಹಾಳು, ಕಂಚಿಗನಹಾಳ್, ಮಲಹಾಳ್, ಪೆನ್ನಸಮುದ್ರ, ಮರವಂಜಿ, ಮರವಂಜಿತಾಂಡ, ಜಮ್ಮಾಪುರ, ಮೇದುಗೊಂಡನಹಳ್ಳಿ, ಹಲಕನಹಾಳು ಮುಂತಾದ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರಿಂದ ಹೆಚ್ಚಿನ ದಾಖಲಾತಿಯನ್ನು ಹೊಂದಿದ್ದು ೮, ೯ ಮತ್ತು ೧೦ನೇ ತರಗತಿಗಳು ತಲಾ ೩ ವಿಭಾಗಗಳಂತೆ ಒಟ್ಟು ೯ ವಿಭಾಗವನ್ನು ಹೊಂದಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಕಂಚಿಗನಹಾಳ್, ವಡ್ಡನಹಾಳ್, ಮೇದುಗೊಂಡನಹಳ್ಳಿ, ರಾಜಗೊಂಡನಹಳ್ಳಿಯಲ್ಲಿ ಪ್ರೌಢಶಾಲೆಗಳಾಗಿವೆ ಆದಕಾರಣ ದಾಖಲಾತಿಯು ಕಡಿಮೆಗೊಂಡಿದ್ದು ಪ್ರಸ್ತುತ ೮, ೯ ಮತ್ತು ೧೦ನೇ ತರಗತಿಗಳು ತಲಾ ೨ ವಿಭಾಗಗಳನ್ನು ಹೊಂದಿವೆ.

     ಮರವಂಜಿ ಗ್ರಾಮಕ್ಕೆ ಸಂಬಂಧಿಸಿದ ೧೬ ಎಕರೆ ಜಮೀನನ್ನು ಎಸ್.ಜೆ.ಎಂ ಮಠಕ್ಕೆ ಕೊಡಬೇಕೆಂದಿದ್ದನ್ನು ಗ್ರಾಮದವರು ಸೇರಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಒಪ್ಪಿಸಿದರು. ಶ್ರೀಮಠದ ಚರಪಟ್ಟಾಧ್ಯಕ್ಷರಾಗಿದ್ದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರು ಮಠದ ಮನೆಯಲ್ಲಿ ಬಿಡಾರ ಹೂಡಿ ೮ ಎಕರೆ ಅಡಿಕೆ ತೋಟವನ್ನು ಕಟ್ಟಿಸಿರುತ್ತಾರೆ. ಉಳಿದ ೮ ಎಕರೆ ಖುಷ್ಕಿ ಜಮೀನು ಇದೆ. ಅಡಿಕೆ ತೋಟವು ಸಮೃದ್ಧವಾಗಿದ್ದು ಶ್ರೀಮಠಕ್ಕೆ ಒಳ್ಳೆಯ ಆದಾಯವನ್ನು ತಂದುಕೊಡುತ್ತಿದೆ.